ನ್ಯೂ ಐರ್ಲೆಂಡ್  -
ಪೆಸಿಫಿಕ್ ಸಾಗರದ ನೈಋತ್ಯಭಾಗದಲ್ಲಿರುವ ಪಾಪ್ಯವ ನ್ಯೂ ಗಿನ ದೇಶಕ್ಕೆ ಸೇರಿದ ಬಿಸ್‍ಮಾರ್ಕ್ ದ್ವೀಪಸ್ತೋಮದ ಒಂದು ದ್ವೀಪ. ನ್ಯೂ ಬ್ರಿಟನ್ ದ್ವೀಪದ ಉತ್ತರಕ್ಕೆ ಇದೆ. ಇದಕ್ಕೂ ನ್ಯೂ ಬ್ರಿಟನ್ನಿಗೂ ನಡುವೆ ಕಡಲ್ಗಾಲುವೆ ಇದೆ. ವಾಯವ್ಯದಿಂದ ಆಗ್ನೇಯಕ್ಕೆ 350 ಕಿಮೀ. ಉದ್ದಕ್ಕೆ ಚಾಚಿರುವ ಈ ದ್ವೀಪದ ಅಗಲ ಬಲು ಕಿರಿದು. ಇದರ ಆಗ್ನೇಯ ಭಾಗ ಸುಮಾರು 44 ಕಿಮೀ. ಅಗಲವಾಗಿದೆ. ಇದರ 240 ಕಿಮೀ. ಉದ್ದದ ವಾಯವ್ಯಭಾಗ ಕೇವಲ 8 ಕಿಮೀ. ಅಗಲವಾಗಿದೆ. ಇದು ಸಾಮಾನ್ಯವಾಗಿ ಬೆಟ್ಟಗುಡ್ಡಗಳಿಂದ ಕೂಡಿದ್ದು. ದಕ್ಷಿಣಭಾಗದಲ್ಲಿರುವ ರೋಸೆಲ್ ಪರ್ವತದ ಎತ್ತರ 1,871 ಮೀ. ಉತ್ತರದಲ್ಲಿರುವ ಷ್ಲೀನಿಟ್‍ಸ್ ಪರ್ವತ ಸುಮಾರು 567 ಮೀ. ಎತ್ತರವಾಗಿದೆ. ವಾಯವ್ಯದ ಬಹುಭಾಗ ಸುಣ್ಣಕಲ್ಲು ಗುಡ್ಡಗಳಿಂದ ಕೂಡಿದ್ದು. ಲೆಲೆಟ್ ಪ್ರಸ್ಥಭೂಮಿ ಸರಾಸರಿ 610ಮೀ. ಎತ್ತರವಾಗಿದೆ. ಕಡಲಂಚು ಹವಳದ ದಿಬ್ಬದಿಂದ ಅಥವಾ ಮೆಕ್ಕಲು ಮಣ್ಣಿನಿಂದ ಕೂಡಿದ ಮೈದಾನ. ಇಲ್ಲಿಯ ಹಲವಾರು ತೊರೆಗಳಿಂದ ಮೆಕ್ಕಲು ಮಣ್ಣಿನ ಮೈದಾನ ರೂಪುಗೊಂಡಿದೆ. ಅವುಗಳಲ್ಲಿ ಪ್ರಮುಖವಾದ್ದು 40 ಕಿಮೀ. ಉದ್ದದ ವೈಟಿನ್. ಒಳ್ಳೆಯ ರೇವುಗಳು ಯಾವುವೂ ಇಲ್ಲಿ ಇಲ್ಲ.

	ಇಲ್ಲಿಯ ಮುಖ್ಯ ಬೆಳೆ ತೆಂಗು. ಪೂರ್ವತೀರದಲ್ಲಿ ಇದು ವಿಶೇಷವಾಗಿದೆ. ಜನಸಾಂದ್ರತೆ ಉತ್ತರದಲ್ಲಿ ಹೆಚ್ಚು. ಕಾವಿಯೆಂಗ್ ಪಟ್ಟಣ ಈ ದ್ವೀಪದ ವಾಯವ್ಯ ತುದಿಯಾದ ನಾರ್ತ್ ಭೂಶಿರದ ಮೇಲಿದೆ. ಇದೊಂದು ರೇವುಪಟ್ಟಣ. ಇಲ್ಲಿಂದ ಸ್ಯಾಮೊಗೆ ರಸ್ತೆಯುಂಟು. ಆಗ್ನೇಯದಲ್ಲಿರುವ ನಾಮಟನೈ ಇನ್ನೊಂದು ರೇವು ಪಟ್ಟಣ. ಇದನ್ನು ಮೊದಲ ಬಾರಿಗೆ ಕಂಡ (1616) ಐರೋಪ್ಯನೆಂದರೆ ಜಾಕ್ಯೂಸ್ ಲಮೇರ್ ಎಂಬ ಡಚ್ ನಾವಿಕ. ನ್ಯೂ ಬ್ರಿಟನ್ ಮತ್ತು ನ್ಯೂ ಗಿನಿಯೂ ಸೇರಿದ ಭೂಪ್ರದೇಶದ ಒಂದು ಭಾಗವಿದೆಂದು ಅವನು ಭಾವಿಸಿದ್ದ. ಫಿಲಿಪ್ ಕಾರ್ಟರೆಟ್ ಎಂಬುವನು 1767ರಲ್ಲಿ ಸೇಂಟ್ ಜಾರ್ಜ್ ಕಡಲ್ಗಾಲುವೆಯನ್ನು ಕಂಡಾಗ ಈ ಭಾವನೆ ತಪ್ಪೆಂಬುದು ವ್ಯಕ್ತವಾಯಿತು. ಅವನು ಈ ದ್ವೀಪವನ್ನು ನೊವ ಹೈಬರ್ನಿಯ (ನ್ಯೂ ಐರ್ಲೆಂಡ್) ಎಂದು ಹೆಸರಿಸಿದ. 1884ರಲ್ಲಿ ಜರ್ಮನಿ ಇದನ್ನು ವಶಪಡಿಸಿಕೊಂಡು ನ್ಯೂ ಮೆಕ್ಲೆನ್‍ಬರ್ಗ್ ಎಂದು ಇದಕ್ಕೆ ನಾಮಕರಣ ಮಾಡಿತು. ಒಂದನೆಯ ಮಹಾಯುದ್ಧದ ಅನಂತರ ಇದು ಆಸ್ಟ್ರೇಲಿಯ ಇದನ್ನು ಮತ್ತೆ ವಶಪಡಿಸಿಕೊಂಡಿತು. 1975ರಲ್ಲಿ ಪಾಪ್ಯವ ನ್ಯೂ ಗಿನಿ ಸ್ವತಂತ್ರವಾದಾಗ ಅದರ ಅಂಗವಾಗಿ ಇದು ಮುಂದುವರಿಯಿತು.
(ಪಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ